ಪಿಲ್ಟ್‍ಡೌನ್ ಮನುಷ್ಯ -
ಅಜ್ಞಾತ ವ್ಯಕ್ತಿಯೊಬ್ಬ 1900 ರ ಸುಮಾರಿಗೆ ಖೋಟಾ ಫಾಸಿಲ್ ತಲೆಬುರುಡೆ ಮತ್ತು ದವಡೆಗಳನ್ನು ಸಂಯೋಜಿಸಿ ಬೆಸೆದ ಮೋಸ ಪ್ರಕರಣ. ಇಂಗ್ಲೆಂಡಿನ ಚಾಲ್ರ್ಸ್ ಡಾಸನ್ ಮತ್ತು ಸ್ಮಿತ್ ವುಡ್‍ವರ್ಡ್ ಎಂಬುವರು ಪಿಲ್ಟ್‍ಡೌನ್ (ಇಂಗ್ಲೆಂಡಿನ ಸಸೆಕ್ಸ್) ಎಂಬಲ್ಲಿ 1908-15 ರ ಅವಧಿಯಲ್ಲಿ ಮರಳು ನಿಕ್ಷೇಪವನ್ನು ಪರಿಶೋಧಿಸುತ್ತಿದ್ದರು. ಅಲ್ಲಿ ಅವರಿಗೆ ತಲೆಬರುಡೆಯೊಂದರ ಹಲವು ಚೂರುಗಳು, ಕೆಳದವಡೆಯ ಅರ್ಧಭಾಗ ಮತ್ತು ಅನೇಕ ಹಲ್ಲುಗಳು ದೊರೆತವು. ಅವುಗಳ ಪೈಕಿ ಉದ್ದವಾದ ಒಂದು ಕೋರೆಹಲ್ಲು ಕೂಡ ಇತ್ತು. ಈ ಅವಶೇಷಗಳ ಜೊತೆಯಲ್ಲಿ ಶಿಲಾಯುಧಗಳೂ (ಇಯೋಲಿತ್ಸ್) ಗತವಂಶಿಯಾಗಿದ್ದ ಮೆರಿಡೋನಿಯಾಲಿಸ್ ಎಂಬ ಆನೆಯ ತೊಡೆ ಎಲುಬಿನಿಂದ ಮಾಡಿದ ಆಯುಧವೂ ಸಿಕ್ಕಿದವು. ತಲೆಬುರುಡೆಯ ಗಾತ್ರ ಮಾನವನ ತಲೆ ಬುರುಡೆಯನ್ನು ಹೋಲುತ್ತಿತ್ತು. ಆದರೆ ಕೆಳದವಡೆಗೂ ಹಲ್ಲುಗಳಿಗೂ ಪೂರ್ಣ ಕಪಿಯ ಲಕ್ಷಣಗಳೇ ಇದ್ದವು. ಕೋರೆ ಹಲ್ಲುಗಳಂತೂ ಆ ತನಕ ದೊರೆತಿದ್ದ ಯಾವ ಮಾನವ ಪ್ರಕಾರಗಳಲ್ಲೂ ಇರದಷ್ಟು ಹೊರಚಾಚಿದ್ದವು. ಆ ಪ್ರಾಣಿ ವಿಶೇಷವನ್ನು ಮಾನವವಂಶವೃಕ್ಷದ ಮೊತ್ತಮೊದಲನೆಯ ಪ್ರಕಾರ ಎಂಬುವುದಾಗಿ ಡಾಸನ್ ನಿರ್ಧರಿಸಿ ಆ ಕಾರಣದಿಂದ ಇದಕ್ಕೆ ಇಯೋಆಂಥ್ರಪಸ್ ಡಾಸೊನಿ (ಡಾಸೊನಿಯವರ ಮೊದಲ ಮಾನವ) ಎಂಬ ಹೆಸರಿಟ್ಟ. ಇದು ಪಿಲ್ಟ್‍ಡೌನ್ ಮಾನವ ಎಂಬುವುದಾಗಿ ಪ್ರಸಿದ್ಧಿ ಪಡೆದಿದೆ. ಮೆರೆಡೋನಿಯಾಲಿಸ್ ಎಂಬ ಆನೆ ಪ್ಲಿಯೊಸೀನ್ ಅಂತ್ಯಕಾಲ ಮತ್ತು ಪ್ಲಿಸ್ಟೊಸೀನ್ ಆದಿಕಾಲಗಳಲ್ಲಿ ಜೀವಿಸಿತು. ಆದ್ದರಿಂದ ಪಿಲ್ಟ್‍ಡೌನ್ ಮಾನವ ಪ್ಲಿಸ್ಟೊಸೀನ್ ಯುಗದ ಆದಿ ಕಾಲದಲ್ಲಿ (ಒಂದು ಲಕ್ಷ ವóರ್ಷಗಳಷ್ಟು ಹಿಂದೆ) ಜೀವಿಸಿದ್ದನೆಂದು ನಿರ್ಧರಿಸಲಾಯಿತು.

	ಈ ಕಪಿ ಮಾನವ ಪಿತಿಕ್ಯಾಂಥ್ರೊಪಸ್, ಸೈನಾಂಥ್ರೊಪಸ್ ಮತ್ತು ನಿಯಾಂಡರ್ತಲ್ ಮಾನವರುಗಳಿಗಿಂತ ಈಚಿನವ ಎಂಬುವುದನ್ನು ನೆನಪಿನಲ್ಲಿ ಇಡಬೇಕು. ಕ್ರಮೇಣ ಇದರ ತಲೆಬುರುಡೆ ಮತ್ತು ದವಡೆಗಳು ಒಂದೇ ಪ್ರಾಣಿಯ ಅವಶೇಷಗಳೇ ಎಂಬ ವಿಚಾರವಾಗಿ ವಾದವಿವಾದಗಳು ನಡೆದವು. ಅನೇಕ ತಜ್ಞರು ಮಾನವನ ತಲೆಬುರುಡೆ ಮತ್ತು ಕಪಿಯ ದವಡೆಗಳು ಒಂದೇ ಕಡೆ ಸಮಾಧಿಗೊಂಡಿರಬೇಕೆಂದು ವಾದಿಸಿದರು. ಆದರೆ, ಪಶ್ಚಿಮ ಯೂರೋಪಿನಲ್ಲಿ ಪ್ಲಿಸ್ಟೊಸೀನ್ ಯುಗದ ಆದಿ ಕಾಲದಲ್ಲಿ ಕಪಿಗಳು ಇದ್ದುವೆಂಬುದಕ್ಕೆ ಯಾವ ಕುರುಹು ಸಿಕ್ಕಿಲ್ಲ. ಬ್ರೂಮ್ ಎಂಬಾತ 1949 ರಲ್ಲಿ ಪಿಲ್ಟ್‍ಡೌನ್ ಮಾನವ ಅವಶೇಷಗಳನ್ನು ಪುನಃ ಪರೀಕ್ಷಿಸಿ ಅವು ಒಂದೇ ಪ್ರಾಣಿಗೆ ಸೇರಿದವು ಎಂಬ ಅಭಿಪ್ರಾಯಕ್ಕೆ ಬಂದ. ಇಲ್ಲಿ ದವಡೆಗಳ ವಿಕಾಸ ಮೇಲುನಡಿಗೆಯಲ್ಲಿ ಸಾಗಿದ್ದರೆ, ಮಿದುಳಿನ ವಿಕಾಸ ತೀವ್ರಗತಿಯಲ್ಲಿ ಸಾಗಿದೆ ಎಂದು ಆತ ಹೇಳಿದ. ತಜ್ಞರ ಸಂಶಯಪ್ರವೃತ್ತಿಯ ಬಗ್ಗೆ ಅವರು ಪಿತಿಕ್ಯಾಂಥ್ರೊಪಸ್ ಎರೆಕ್ಟಸ್ ಪ್ರಕಾರದ ವಿಚಾರವಾಗಿಯೂ ಇದ್ದ ಒಂದೇ ರೀತಿಯ ವಾದದತ್ತ ಅವರ ಲಕ್ಷ್ಯವನ್ನು ಸೆಳೆದ. ಆ ಪ್ರಕಾರದಲ್ಲಿ ತಲೆ ಮತ್ತು ಕಾಲುಗಳ ವಿಕಾಸಗತಿಯಲ್ಲಿ ವ್ಯತ್ಯಾಸವಿದೆ ಎಂದು ಒಪ್ಪಿಕೊಂಡ ಬಳಿಕ ಇಯೊಆಂಥ್ರೊಪಸನ ತಲೆಯ ಎರಡು ಭಾಗಗಳಾದ ತಲೆ ಬುರುಡೆ ಮತ್ತು ದವಡೆಗಳ ವಿಕಾಸಗತಿಯಲ್ಲಿಯೂ ವ್ಯತ್ಯಾಸ ಇದೆ ಎಂದು ಒಪ್ಪಬಹುದು. ಅದು ವಿಕಾಸ ಸಹಜವಾದದು ಎಂದು ವಾದಿಸಿದ. ಆದಾಗ್ಯೂ ಇಯೊಆಂಥ್ರಪಸನ ಈ ಅಸಮಂಜಸತೆಯ ವಿಚಾರವಾಗಿ ಸಂಶಯ ನಿವಾರಣೆ ಆಗಲೇ ಇಲ್ಲ. ತಲೆ ಬುರುಡೆ ಮತ್ತು ಕೆಳ ದವಡೆಗಳನ್ನು ಪ್ಲೂರೀನ್ ಪರೀಕ್ಷೆಗೆ ಒಳಪಡಿಸಲಾಯಿತು. ಇವೆರಡರಲ್ಲಿಯೂ ಪ್ಲೂರೀನ್ ಪ್ರಮಾಣ ಬಲುಕಡಿಮೆ ಇದ್ದುದು ವ್ಯಕ್ತವಾದರೂ ಎರಡರಲ್ಲೂ ಒಂದೇ ಮಟ್ಟದಲ್ಲಿರುವುದು ಕಂಡುಬಂದಿತು. ಇದರಿಂದ ಈ ಅವಶೇಷಗಳು ವರ್ತಮಾನ ಕಾಲದವುಗಳೆಂದು ಸೂಚಿತವಾದರೂ ಒಂದೇ ಪ್ರಾಣಿಗೆ ಸೇರಿದವಲ್ಲ ಎಂದು ಹೇಳಲಾಗಲಿಲ್ಲ. 

	ಆಕ್ಸ್‍ಫರ್ಡಿನ ವೀನರ್ ಎಂಬಾತ 1915 ರಲ್ಲಿ ಈ ಅವಶೇಷಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸುತ್ತಿದ್ದಾಗ ದವಡೆ ಹಲ್ಲುಗಳ ಸವಡಿನ ಅಸ್ವಾಭಾವಿಕತೆಯನ್ನೂ ಅವು ಕಪಿಗಳಲ್ಲಿಯಂತೆ ಇಲ್ಲದ್ದನ್ನೂ ಗಮನಿಸಿದ. ಹಲ್ಲಿನ ಗಾರೆಯ ಕೆಳಭಾಗ ಬಹುಬಿಳುಪಾಗಿರುವುದು ಹೆಚ್ಚಿನ ಸಂಶಯಕ್ಕೆ ಕಾರಣವಾಯಿತು. ವಿವರವಾಗಿ ಪರೀಕ್ಷಿಸಿದಾಗ ಇವುಗಳಿಗೆ ಕೃತಕವಾಗಿ ಬಣ್ಣ ಕಟ್ಟಿ ಯಾವ ಆಕಾರ ಬೇಕೋ ಅದಕ್ಕೆ ಉಜ್ಜಿ ತುಂಬಿರುವುದು ಕಂಡುಬಂದಿತು. ಆದ್ದರಿಂದ ಈ ಬಾರಿ ಅವಶೇಷಗಳನ್ನು ಕೊರೆದು ತೆಗೆದ ತಿರುಳನ್ನು ಫ್ಲೂರಿನ್ ಪರೀಕ್ಷೆಗೆ ಒಳಪಡಿಸಲಾಯಿತು. ಆಗ ದವಡೆ ಮತ್ತು ಹಲ್ಲುಗಳಲ್ಲಿ 0.02% ರಷ್ಟು ಮತ್ತು ತಲೆಬುರುಡೆಯಲ್ಲಿ 0.1% ರಷ್ಟು ಫ್ಲೂರಿನ್ ವ್ಯಕ್ತವಾಯಿತು. ಆದ್ದರಿಂದ ಇವೆರಡೂ ಒಂದೇ ಪ್ರಾಣಿಗೆ ಸೇರಿದವಲ್ಲವೆಂಬುದು ಸ್ಥಿರಪಟ್ಟಿತು.

	ಮುಂದೆ 1953 ರಲ್ಲಿ ವೀನರ್ ಓಕ್ಲೆ ಮತ್ತು ಸಂಗಡಿಗರು ಈ ಸಂಶೋಧನೆಯ ಫಲಿತಾಂಶವನ್ನು ಪ್ರಕಟಿಸಿ ಪಿಲ್ಟ್‍ಡೌನ್ ಮಾನವ ಅವಶೇಷಗಳು ಖೋಟಾ ಎಂದು ಸಾರಿದರು. ತಲೆಬುರುಡೆ ಮಾನವನದೆಂದೂ ದವಡೆ ಮತ್ತು ಹಲ್ಲುಗಳು ಒರಾಂಗ್ ಉಟಾನ್ ಎಂಬ ಕಪಿಯದೆಂದೂ ನಿರ್ಧರಿಸಿದರು. ಬೋರ್ನಿಯೊದಲ್ಲಿ ಡ್ಯಾಕ್ ಜನಾಂಗದವರು ಉರಾಂಗ್ ಕಪಿಯ ತಲೆಬುರುಡೆಯನ್ನು ಶವದೊಡನೆ ಹೂಳುವುದು ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಈ ದವಡೆಗಳು ಅವುಗಳ ಪೈಕಿ ಒಂದು ಇರಬೇಕೆಂದು ಸೂಚಿಸಿದರು. ಅಲ್ಲದೆ ಎಲುಬಿನ ಆಯುಧವನ್ನು ಟ್ಯುನಿಸಿಯಾದ ಗತವಂಶಿ ಸ್ಟೀಗೊಡಾನ್ ಆನೆಯ ಅವಶೇಷದಿಂದ ಕೃತಕವಾಗಿ ತಯಾರಿಸಲಾಗಿದೆ ಎಂದು ಅಭಿಪ್ರಾಯಪಟ್ಟರು.

	ಪುನಃ 1954 ರಲ್ಲಿ ಡಿಪ್ರೈಸ್ ಮತ್ತು ಓಕ್ಲೆ ಇಂಗಾಲ ಕಾಲನಿರ್ಣಯ ವಿಧಾನದಿಂದ ಪಿಲ್ಟ್‍ಡೌನ್ ತಲೆಬುರುಡೆ 620 ( 100 ವರ್ಷಗಳ ಹಿಂದಿನದೆಂದೂ ಮತ್ತು ದವಡೆ 500 ( 100 ವರ್ಷಗಳ ಹಿಂದಿನದೆಂದೂ ನಿರ್ಧರಿಸಿದರು. ಹೀಗೆ ಇಯೊಆಂಥ್ರೊಪಸ್ ಎಂಬುದು ವಿಜ್ಞಾನಿಗಳು ಖ್ಯಾತಿಗಾಗಿ ಅಪ್ರಮಾಣಿಕತೆಯ ಕುರುಹಾಗಿ ಖೋಟಾ ಮಾನವ ಎನಿಸಿಕೊಂಡಿದೆ.
(ಡಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ